ಚುಕ್ಕೆಜಿಂಕೆ
-	ಭಾರತ ಮತ್ತು ಶ್ರೀಲಂಕಾಗಳಲ್ಲಿ ಕಾಣಬರುವ ಒಂದು ಸುಂದರವಾದ ಜಿಂಕೆ (ಸ್ಟಾಟೆಡ್ ಡಿಯರ್, ಚಿತಾಲ್, ಆಕ್ಸಿಸ್ ಡಿಯರ್). ಆರ್ಟಿಯೊಡ್ಯಾಕ್ಟಿಲ ಗಣದ ಸರ್ವಿಡೀ ಕುಟುಂಬಕ್ಕೆ ಸೇರಿದೆ. ಆಕ್ಸಿಸ್ ಆಕ್ಸಿಸ್ ಎಂಬುದು ಇದರ ಶಾಸ್ತ್ರೀಯ ಹೆಸರು. ಮೈದಾನಸೀಮೆಯ ಕುರುಚಲು ಇಲ್ಲವೆ ಪರ್ಣಪಾತಿಗಿಡಗಳ ಕಾಡುಗಳಲ್ಲಿ, ಹುಲ್ಲುಗಾವಲುಗಳಲ್ಲಿ ವಾಸಿಸತ್ತದೆ. ಸಮುದ್ರಮಟ್ಟದಿಂದ ಸುಮಾರು 4000' ಎತ್ತರದ ಪ್ರದೇಶಗಳಲ್ಲೂ ಕಾಣದೊರೆಯುತ್ತದೆ. ಭಾರತದ ಅಸ್ಸಮ್, ಪಂಜಾಬ್ ಮತ್ತು ರಾಜಾಸ್ಥಾನಗಳನ್ನುಳಿದು ಇನ್ನೆಲ್ಲ ರಾಜ್ಯಗಳಲ್ಲೂ ಇದರ ವ್ಯಾಪ್ತಿ ಉಂಟು. ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು ಇಲ್ಲೆಲ್ಲ ಇದು ಹೇರಳವಾಗಿದೆ. ಮಾಟವಾದ ಹೊನ್ನಿನ ಬಣ್ಣದ ದೇಹ, ಮೈಯ ಚೆಲುವನ್ನು ಹೆಚ್ಚಿಸುವಂತೆ ಇರುವ ಬಿಳಿಬಣ್ಣದ ಚುಕ್ಕೆಗಳು, ಕಾತರವನ್ನು ಹೊರಸೂಸುವಂತಿರುವ ವಿಶಾಲವಾದ ಕಣ್ಣುಗಳು, ಸದ್ದುಬಂದ ಕಡೆ ನಿಮಿರಿ ತಿರುಗಿನಿಲ್ಲುವ ಕಿವಿಗಳು-ಈ ಲಕ್ಷಣಗಳು ಚುಕ್ಕೆ ಜಿಂಕೆಯನ್ನು ಜಿಂಕೆಗಳಲ್ಲೆಲ್ಲ ಅತ್ಯಂತ ಸುಂದರವಾದ ಹಾಗೂ ಆಕರ್ಷಣೀಯವಾದ ಪ್ರಾಣಿಯನ್ನಾಗಿ ಮಾಡಿವೆ.

	ಮಧ್ಯಮಗಾತ್ರದ ಜಿಂಕೆಯಿದು ; ಗಂಡು ಜಿಂಕೆಯು ಉದ್ದ 1-1.75m ಭುಜದ ಬಳಿಯ ಎತ್ತರ 0.6-1m ; ತೂಕ 50-90ಞg. ಗಂಡುಜಿಂಕೆಯಲ್ಲಿ ಮಾತ್ರ ಒಂದು ಜೊತೆ ಕೊಂಬುಗಳಿವೆ. ಒಂದೊಂದು ಕೊಂಬಿನಲ್ಲೂ 3 ಕವಲುಗಳುಂಟು. ಕೊಂಬುಗಳ ಉದ್ದ ಸುಮಾರು 75-100ಛಿm. ವರ್ಷಕ್ಕೊಮ್ಮೆ ಕೊಂಬುಗಳು ಉದುರಿ ಹೋಗುತ್ತವೆ. ಚುಕ್ಕೆ ಜಿಂಕೆಯ ಬಾಲ ತೆಳುವಾಗಿಯೂ ಉಳಿದ ಜಿಂಕೆಗಳ ಬಾಲಕ್ಕಿಂತ ಉದ್ದವಾಗಿಯೂ ಇದೆ. ಇದು ಯಾವಾಗಲೂ 20-100 ಪ್ರಾಣಿಗಳ ಹಿಂಡುಗಳಲ್ಲೇ ಓಡಾಡುತ್ತದೆ. ಹುಲ್ಲು, ಎಳೆ ಚಿಗುರು ಇದರ ಪ್ರಧಾನ ಆಹಾರ. ನೆಲಕ್ಕುದುರಿದ ಹೂಗಳೂ ಹಣ್ಣುಗಳೂ ಇದಕ್ಕೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಬೆಳಗಿನ ಜಾವದಲ್ಲೊಮ್ಮೆ ಮತ್ತು ಸಂಜೆ ಕತ್ತಲಾಗುವ ಮುನ್ನ ಒಮ್ಮೆ ಹುಲ್ಲು ಮೇಯುತ್ತ ಅಲೆದಾಡುತ್ತಿದ್ದು ಮಧ್ಯಾಹ್ನ ಮರಗಳ ನೆರಳಿನಲ್ಲಿ ಮಿಶ್ರಮಿಸುತ್ತದೆ. ತುಂಬ ಚೆನ್ನಾಗಿ ಈಜಬಲ್ಲ ಇದು ಆಗಿಂದಾಗ್ಗೆ ನೀರಿಗಿಳಿಯುವುದೂ ಉಂಟು. ಗಂಡು ಹೆಣ್ಣುಗಳು ಕೂಡುವ ಕಾಲ ಸಾಧಾರಣವಾಗಿ ಏಪ್ರಿಲ್ -ಮೇ, 7-8 ತಿಂಗಳ ಗರ್ಭಾವಸ್ಥೆಯ ಅನಂತರ 2 ಮರಿಗಳು ಹುಟ್ಟುತ್ತವೆ. ಚುಕ್ಕೆ ಜಿಂಕೆಯ ಆಯಸ್ಸು 10-15 ವರ್ಷಗಳು. ಬಲು ಸುಂದರವಾಗಿರುವುದರಿಮದ ಇದನ್ನು ಸಾಕವುದುಂಟು. ಇದರ ಧರ್ಮ ಹಾಗೂ ಕೊಂಬು ಗೃಹಾಲಂಕರಣದ ವಸ್ತುಗಳಾಗಿವೆ. ಕೊಂಬಿಗೆ ಔಷಧೀಯ ಗುಣಗಳೂ ಉಂಟು. ಇದರ ಮಾಂಸ ಬಲುರುಚಿಯೆಂದು ಹೇಳಲಾಗಿದೆ.
(ಕೆ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ